Search


ಮೋದಿಗೆ ಪತ್ರ ಬರೆದ ಜಿರಳೆ ಪಾರ್ಟಿ; ಮೃತ ವಿದ್ಯಾರ್ಥಿಗಳಿಗೆ 1 ಕೋಟಿ ಪರಿಹಾರಕ್ಕೆ ಆಗ್ರಹ

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ನೊಂದು ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ಪರಿಹಾರ ನೀಡುವಂತೆ ಕಾಕ್ರೋಚ್‌ ಜನತಾ ಪಾರ್ಟಿ (Cockroach Janata Party) ಆಗ್ರಹಿಸಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಸಿಜೆಪಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ (Abhijeet Dipke) ಪತ್ರ ಬರೆದಿದ್ದಾರೆ.

ಈಗಾಗಲೇ ನೀಟ್‌ ಪೇಪರ್‌ ಸೋರಿಕೆ ವಿರುದ್ದ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ಜಿರಳೆ ಪಕ್ಷ, ಇದೀಗ ಪ್ರಧಾನಿ ಮೋದಿಗೆ ಪತ್ರ ಬರೆದಿದೆ. ಪತ್ರದಲ್ಲಿ, ಪ್ರಶ್ನೆ ಪತ್ರಿಕೆ ಸೋರಿಕೆಗೆ ಹೊಣೆಗಾರಿಕೆ ವಹಿಸುವಂತೆ ಒತ್ತಾಯಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸುವ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ನಮ್ಮ ದೇಶದ ಭವಿಷ್ಯಕ್ಕೆ ಅಂದರೆ ನಮ್ಮ ಯುವ ವಿದ್ಯಾರ್ಥಿಗಳ ಜೀವನ ಮತ್ತು ಮಾನಸಿಕ ಆರೋಗ್ಯಕ್ಕೆ ಬೆದರಿಕೆಯೊಡ್ಡಿ ಬೆಳೆಯುತ್ತಿರುವ ಬಿಕ್ಕಟ್ಟಿನ ಬಗ್ಗೆ ನಿಮ್ಮ ಗಮನ ಸೆಳೆಯಲು ನಾನು ಇಂದು ಭಾರವಾದ ಹೃದಯದಿಂದ ನಿಮಗೆ ಪತ್ರ ಬರೆಯುತ್ತಿದ್ದೇನೆ ಎಂದು ದಿಪ್ಕೆ ಬೇಸರ ಹೊರಹಾಕಿದ್ದಾರೆ. 

1 ಕೋಟಿ ಪರಿಹಾರಕ್ಕೆ ಆಗ್ರಹ..!

ಈಗಾಗಲೇ ಕಳೆದ ಕೆಲ ವಾರಗಳಿಂದ 11 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಕಳೆದ 48 ಗಂಟೆಗಳಲ್ಲಿ ಐದು ಸಾವುಗಳು ಸಂಭವಿಸಿವೆ. ಅನೇಕ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಕನಸುಗಳನ್ನು ನನಸಾಗಿಸಲು ಶೈಕ್ಷಣಿಕ ಸಾಲ ಪಡೆದಿದ್ದಾರೆ. ತಮ್ಮ ಇಡೀ ಜೀವನದ ಉಳಿತಾಯವನ್ನು ಖರ್ಚು ಮಾಡಿ ಮಕ್ಕಳನ್ನು ಕಳೆದುಕೊಂಡು ಈ ಕುಟುಂಬಗಳು ಸಂಪೂರ್ಣವಾಗಿ ನಿರ್ಗತಿಕರಾಗಿದ್ದಾರೆ. ಆದ್ದರಿಂದ, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕಾಕ್ರೊಚ್ ಜನತಾ ಪಕ್ಷವು ಕಳೆದ ಒಂದು ತಿಂಗಳಿನಿಂದ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸುತ್ತಿದೆ. ಈ ಬಗ್ಗೆ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಜೀವಹಾನಿ ಘಟನೆಗಳಿಗೆ ಸ್ವಲ್ಪ ಹೊಣೆಗಾರಿಕೆ ಬೇಕಾಗಿದೆ. ಶಿಕ್ಷಣ ಸಚಿವರನ್ನು ಅವರ ಹುದ್ದೆಯಿಂದ ತೆಗೆದುಹಾಕುವಂತೆ ನಾವು ನಿಮ್ಮನ್ನು ಗೌರವದಿಂದ ವಿನಂತಿಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

By Ravikumar - 19-06-2026


Ads in Post