Search


ಚುನಾವಣ ಆಯೋಗದ ಕಛೇರಿ ಎದುರು ಕಾಂಗ್ರೆಸ್‌ ಉಪವಾಸ ಸತ್ಯಾಗ್ರಹ: ಅನ್ಯಾಯವಾಗಿದೆ ಎಂದು ಆಕ್ರೋಶ

ನವದೆಹಲಿ: ಮಧ್ಯಪ್ರದೇಶದಿಂದ ರಾಜ್ಯಸಭೆಯ ಮೂರನೇ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಹಿರಿಯ ನಾಯಕಿ ಮೀನಾಕ್ಷಿ ನಟರಾಜನ್ (Meenakshi Natarajan) ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ.  ಇದರ ಬೆನ್ನಲ್ಲೇ ಕಾಂಗ್ರೆಸ್‌ ನಾಯಕರು ಆಕ್ರೋಶಗೊಂಡಿದ್ದು. ಬಿಜೆಪಿ ಚುನಾವಣ ಆಯೋಗವನ್ನ ಬಳಸಿಕೊಂಡು ಸೀಟು ಕಳ್ಳತನ ಮಾಡಿದೆ ಎಂದು ಆರೋಪಿಸಿ ಇಂದು ಚುನಾವಣ ಆಯೋಗದ ಕಛೇರಿ ಎದುರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದೆ.

ಮೀನಾಕ್ಷಿ ನಟರಾಜನ್‌ ಅವರ ನಾಮಪತ್ರ ತಿರಸ್ಕೃತ..!

ಮಧ್ಯಪ್ರದೇಶದಿಂದ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಮೀನಾಕ್ಷಿ ನಟರಾಜನ್‌ ಅವರ ನಾಮಪತ್ರವನ್ನ ಚುನಾವಣಾ ಆಯೋಗ ತಿರಸ್ಕರಿಸಿತ್ತು. ತಮ್ಮ ಅಫಿಡವಿಟ್‌ನಲ್ಲಿ ಹೈದರಾಬಾದ್ ನ್ಯಾಯಾಲಯದಲ್ಲಿ ಬಾಕಿ ಇರುವ ಕ್ರಿಮಿನಲ್ ಪ್ರಕರಣದ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ನಾಮಪತ್ರ ಸಲ್ಲಿಕೆಗೆ ಜೂನ್ 8 ಕೊನೆಯ ದಿನವಾಗಿದ್ದರಿಂದ, ಕಾಂಗ್ರೆಸ್‌ಗೆ ಈಗ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಾಗದೆ ಆ ಸ್ಥಾನವನ್ನು ಕಳೆದುಕೊಂಡಿದೆ. ಇದರಿಂದಾಗಿ ಬಿಜೆಪಿಯ (BJP) ಮೂರನೇ ಅಭ್ಯರ್ಥಿ ಮಹೇಶ್ ಕೇವತ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಮೀನಾಕ್ಷಿ ನಟರಾಜನ್ ವಿರುದ್ಧ ಹೈದರಾಬಾದ್‌ನ ‘ನಾಲ್ಕನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್’ ನ್ಯಾಯಾಲಯದಲ್ಲಿ 2025 ರ ಆಗಸ್ಟ್‌ನಿಂದ ಕ್ರಿಮಿನಲ್ ಪ್ರಕರಣವೊಂದು ಬಾಕಿ ಇದೆ. ಬಿಎನ್‌ಎಸ್ (BNS) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಅವರಿಗೆ ನೋಟಿಸ್ ಕೂಡ ಜಾರಿ ಮಾಡಿತ್ತು. ನಾಮಪತ್ರ ಸಲ್ಲಿಕೆಯ ವೇಳೆ ಈ ಕ್ರಿಮಿನಲ್ ಪ್ರಕರಣದ ವಿವರಗಳನ್ನು ಅಫಿಡವಿಟ್‌ನಲ್ಲಿ ನಮೂದಿಸದ ಕಾರಣದಿಂದ ಬಿಜೆಪಿಯ ಮಹೇಶ್ ಕೇವತ್ ನೀಡಿದ ದೂರಿನ ಆಧಾರದ ಮೇಲೆ ಚುನಾವಣಾಧಿಕಾರಿಗಳು ನಾಮಪತ್ರವನ್ನು ವಜಾಗೊಳಿಸಿದ್ದಾರೆ.

ನಾಮಪತ್ರ ರದ್ದತಿಯನ್ನು ಪ್ರತಿಭಟಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಸಚಿನ್ ಪೈಲಟ್ ಮತ್ತು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಅವರನ್ನೊಳಗೊಂಡ ಉನ್ನತ ಮಟ್ಟದ ನಿಯೋಗವು ನವದೆಹಲಿಯ ಕೇಂದ್ರ ಚುನಾವಣಾ ಆಯೋಗದ ಕಚೇರಿಗೆ ಧಾವಿಸಿತು. ಸಂಜೆ 6 ಗಂಟೆಯ ನಂತರ ಕಚೇರಿಯಲ್ಲಿ ಉನ್ನತ ಅಧಿಕಾರಿಗಳು ಇಲ್ಲದ ಕಾರಣ ಅವರಿಗೆ ಒಳಗೆ ಹೋಗಲು ಬಿಡದಿದ್ದಾಗ, ಕಾಂಗ್ರೆಸ್ ನಾಯಕರು ಗೇಟ್ ಮುಂಭಾಗದಲ್ಲೇ ಧರಣಿ ಕುಳಿತು ಆಕ್ರೋಶ ಹೊರಹಾಕಿದರು. ನಂತರ ಆಯೋಗವು ಕಾಂಗ್ರೆಸ್‌ನ ಜ್ಞಾಪನಾ ಪತ್ರವನ್ನು ಸ್ವೀಕರಿಸಿದೆ.

ಇನ್ನು ಈ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌ ಮಾತನಾಡಿದ್ದು, “ಇದು ಪ್ರಜಾಪ್ರಭುತ್ವದ ಹಗಲು ದರೋಡೆ. ನಮ್ಮ ಶಾಸಕರನ್ನು ಸೆಳೆಯುವ ಬಿಜೆಪಿಯ ಕೀಳು ತಂತ್ರಗಳು ವಿಫಲವಾದಾಗ ಅವರು ಈ ಮಾರ್ಗ ಹಿಡಿದಿದ್ದಾರೆ. ನಾಮಪತ್ರದಲ್ಲಿ ತಪ್ಪು ಮುಚ್ಚಿಡಲಾಗಿದೆ ಎಂಬುದು ಸಂಪೂರ್ಣ ಸುಳ್ಳು. ನಾವು ಇದನ್ನು ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಬೀದಿಗಿಳಿದು ಹೋರಾಡಲಿದ್ದೇವೆ.” ಎಂದು ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.
 

By Ravikumar - 10-06-2026


Ads in Post