ಬೆಂಗಳೂರು: NICE ರಸ್ತೆ ಟೋಲ್ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಯಾವುದೇ ಕಾರಣಕ್ಕೂ NICE ರಸ್ತೆಯಲ್ಲಿ ಟೋಲ್ ಪಾವತಿಸಬೇಡಿ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಾಹನ ಸವಾರರಿಗೆ ಕರೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಟೋಲ್ ಪಾವತಿಸದಿದ್ದರೆ FIR ದಾಖಲಿಸುವುದಾಗಿ ಅಧಿಕಾರಿಗಳು ಬೆದರಿಸಿದರೂ ವಾಹನ ಸವಾರರು ಹೆದರಬಾರದು ಎಂದು ಹೇಳಿದ್ದಾರೆ. “FIR ದಾಖಲಿಸಿದರೂ ಹೆದರಬೇಡಿ. ಯಾವುದೇ ಕಾರಣಕ್ಕೂ ಟೋಲ್ ಪಾವತಿಸಬೇಡಿ” ಎಂದು ಅವರು ಮನವಿ ಮಾಡಿದ್ದಾರೆ.
NICE ಕಂಪನಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆರೋಪ ಮಾಡಿರುವ ಕುಮಾರಸ್ವಾಮಿ, ಟೋಲ್ ಸಂಗ್ರಹದ ಹೆಸರಿನಲ್ಲಿ “ಹಗಲು ದರೋಡೆ” ನಡೆಯುತ್ತಿದೆ ಎಂದು ದೂರಿದ್ದಾರೆ. ನ್ಯಾಯಾಲಯದ ತೀರ್ಪು ಹಾಗೂ ಫ್ರೇಮ್‌ವರ್ಕ್ ಒಪ್ಪಂದದ ನಿಯಮಗಳನ್ನು NICE ಕಂಪನಿ ಉಲ್ಲಂಘಿಸಿದೆ ಎಂಬುದು ಅವರ ಆರೋಪ. ರಾಜ್ಯ ಸರ್ಕಾರದ ಅನುಮತಿ ಪಡೆಯದೇ ಟೋಲ್ ದರಗಳನ್ನು ಸುಮಾರು 7ರಿಂದ 8 ಪಟ್ಟು ಹೆಚ್ಚಿಸಲಾಗಿದೆ ಎಂದು ಆರೋಪಿಸಿದ ಅವರು, ಈ ವಿಚಾರವನ್ನು ನ್ಯಾಯಾಲಯದ ಸಿಂಗಲ್ ಹಾಗೂ ಡಿವಿಷನ್ ಬೆಂಚ್‌ಗಳು ಗಮನಿಸಿವೆ. ಆದರೂ ತೀರ್ಪು ಹೊರಬಂದು ಒಂದು ತಿಂಗಳಾದರೂ ಸರ್ಕಾರ ಕ್ರಮ ಕೈಗೊಳ್ಳದೆ ಮೌನ ವಹಿಸಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. .
NICE ರಸ್ತೆಯಲ್ಲಿ ಟೋಲ್ ಹೆಸರಿನಲ್ಲಿ ಸುಮಾರು ₹2,000 ಕೋಟಿ ಅಕ್ರಮವಾಗಿ ಸಂಗ್ರಹಿಸಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಫ್ರೇಮ್‌ವರ್ಕ್ ಒಪ್ಪಂದದ ಪ್ರಕಾರ 111 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸಿ ಐದು ಟೌನ್‌ಶಿಪ್‌ಗಳನ್ನು ನಿರ್ಮಿಸುವವರೆಗೆ ಟೋಲ್ ಸಂಗ್ರಹಿಸಲು ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ.
ಈ ಷರತ್ತುಗಳನ್ನು ಪೂರೈಸದೆ ಟೋಲ್ ಸಂಗ್ರಹ ಮುಂದುವರಿಸಿರುವುದು ಹೇಗೆ? ಟೋಲ್ ದರ ಹೆಚ್ಚಿಸಲು ಯಾವ ಆಧಾರವಿದೆ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಅಲ್ಲದೆ, ಅಕ್ರಮ ಟೋಲ್ ಸಂಗ್ರಹದ ವಿರುದ್ಧ ಸಾರ್ವಜನಿಕರು ಧ್ವನಿ ಎತ್ತಬೇಕು ಎಂದು ಕರೆ ನೀಡಿದ್ದಾರೆ. ಕುಮಾರಸ್ವಾಮಿ ಅವರ ಈ ಹೇಳಿಕೆಯಿಂದ NICE ರಸ್ತೆ ಟೋಲ್ ವಿವಾದ ಮತ್ತೊಮ್ಮೆ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.