ಬೆಂಗಳೂರು: ನೀರಿನೊಂದಿಗೆ ಸೋಡಿಯಂ ರಾಸಾಯನಿಕ ಕ್ರಿಯೆ ನಡೆಸಿ ಸ್ಫೋಟ ಉಂಟುಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ‘ಬಿಗ್ ಬಾಸ್ ಕನ್ನಡ ಸೀಸನ್-10’ರ ಸ್ಪರ್ಧಿ ಹಾಗೂ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಡ್ರೋನ್ ಪ್ರತಾಪ್ (ಎನ್.ಎಂ. ಪ್ರತಾಪ್) ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಜನಕಲೋಟಿ ಪ್ರದೇಶದ ನೀರಾವರಿ ಹೊಂಡದಲ್ಲಿ ಪ್ರತಾಪ್ ಅವರು ನಡೆಸಿದ್ದ ಪ್ರಯೋಗದ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಅಪ್ಲೋಡ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು 2024ರ ಡಿಸೆಂಬರ್ 12ರಂದು ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿದ್ದರು. ಜೀವ ಅಥವಾ ಆಸ್ತಿಗೆ ಅಪಾಯ ಉಂಟುಮಾಡುವ ಸ್ಫೋಟಕ್ಕೆ ಸಂಬಂಧಿಸಿದ ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 3 ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 288ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ನ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ, ಪ್ರಯೋಗ ನಡೆಸಿದ ವಿಧಾನವನ್ನು ಸಮರ್ಥಿಸಲಾಗದಿದ್ದರೂ, ಕೃತ್ಯವು ಶೈಕ್ಷಣಿಕ ಉದ್ದೇಶ ಹೊಂದಿತ್ತು ಎಂದು ಅಭಿಪ್ರಾಯಪಟ್ಟಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಾಪ್ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಡ್ರೋನ್ ಪ್ರತಾಪ್ ಕಣ್ಣೀರು..!
ಪ್ರಕರಣ ರದ್ದಾದ ಬಳಿಕ ಪ್ರತಿಕ್ರಿಯಿಸಿದ ಡ್ರೋನ್ ಪ್ರತಾಪ್ ಭಾವುಕರಾದರು. ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣಗಳಿಂದ ಜೀವನದ ಕೆಲವು ಅಮೂಲ್ಯ ಕ್ಷಣಗಳು ವ್ಯರ್ಥವಾಗಿವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸಿದ ವಕೀಲ ಸಾಗರ್ ಹಾಗೂ ಅವರ ತಂಡಕ್ಕೆ ಕೃತಜ್ಞತೆ ಸಲ್ಲಿಸಿದರು. “ಇಂದು ನನ್ನ ಮೇಲಿದ್ದ ಪ್ರಕರಣಗಳನ್ನು ಹೈಕೋರ್ಟ್ ರದ್ದು ಮಾಡಿದೆ. ಇದು ಸತ್ಯಕ್ಕೆ ಸಿಕ್ಕ ಜಯ. ಗೌರವಾನ್ವಿತ ನ್ಯಾಯಾಲಯಕ್ಕೆ ತಲೆಬಾಗಿ ನಮಸ್ಕರಿಸುತ್ತೇನೆ” ಎಂದು ಕಣ್ಣೀರಿಡುತ್ತಾ ಹೇಳಿದರು.