Search


ಪುರುಷರ ರಕ್ಷಣೆಗೆ ಆಯೋಗ ರಚಿಸಲು ಹೆಚ್‌.ವಿಶ್ವನಾಥ್‌ ಆಗ್ರಹ..!

ಮೈಸೂರು: ಮಹಿಳೆಯರಿಂದ ಪುರುಷರ ಮೇಲೆ ದೌರ್ಜನ್ಯವಾಗುತ್ತಿದೆ, ಈ ರೀತಿ ಶೋಷಣೆಗೆ ಒಳಗಾಗುವ ಪುರುಷರಿಗೆ ರಕ್ಷಣೆ ನೀಡಲು ʻರಾಜ್ಯ ಪುರುಷ ಆಯೋಗʼ ರಚಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಹೆಚ್‌. ವಿಶ್ವನಾಥ್‌ (H Vishwanath) ಆಗ್ರಹಿಸಿದ್ದಾರೆ.  ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲೂ ಈ ಕುರಿತು ಚರ್ಚೆ ಆರಂಭವಾಗಿದ್ದು, ಕೆಲವರು ಇದನ್ನ ಹಾಸ್ಯಾಸ್ಪದವಾಗಿ ತೆಗೆದುಕೊಂಡರೆ, ಉಳಿದವರು ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿರುವುದನ್ನ ಕಾಣಬಹುದು.

ಪುರುಷರ ರಕ್ಷಣಾ ವೇದಿಕೆ ಸ್ಥಾಪಿಸಿದ ವಿಶ್ವನಾಥ್‌..!

ಮೈಸೂರಿನಲ್ಲಿ (Mysuru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪುರುಷ ಆಯೋಗ ರಚನೆಯಾಗಬೇಕು. ಏಕೆಂದ್ರೆ ಗಂಡು ಮಕ್ಕಳು ಮಹಿಳೆಯರಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪುರುಷರ ದೂರುಗಳಿಗೆ ಬೆಲೆ ಕೊಡುತ್ತಿಲ್ಲ. ಪುರುಷರಿಗಾಗಿಯೇ ಪುರುಷ ರಕ್ಷಣಾ ವೇದಿಕೆ ಸ್ಥಾಪಿಸಿದ್ದೇವೆ. ಪುರುಷರಿಗೆ ಆಗುವ ದೌರ್ಜನ್ಯವನ್ನ ತಡೆಯುವುದು ಈ ಸಂಘಟನೆಯ ಉದ್ದೇಶವಾಗಿದೆ ಎಂದು ವಿಶ್ವನಾಥ್‌ ತಿಳಿಸಿದ್ದಾರೆ. 

ಇತ್ತೀಚೆಗೆ ಪುಣೆಯಲ್ಲಿ ನಡೆದ ಕೇತನ್‌ ಅಗರ್ವಾಲ್‌ ಕೊಲೆ, ಕಳೆದ ವರ್ಷ ಹನಿಮೂನ್‌ಗೆ ತೆರಳಿದ್ದ ರಾಜ ರಘುವಂಶಿ ಕೊಲೆ ಸೇರಿದಂತೆ ಅನೇಕ ಪ್ರಕರಣಗಳನ್ನ ಒಟ್ಟುಗೂಡಿಸಿ, ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಚರ್ಚೆಗಳು ಆರಂಭವಾಗಿದೆ. ಇದಕ್ಕೆ ಪ್ರತಿಯಾಗಿ ಪುರುಷ ಸಮಾಜದಿಂದ ಹಿಂಸೆಗೆ ಒಳಗಾದ ಮಹಿಳೆಯರ ಪಟ್ಟಿಯೂ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಲಿಂಗ ಅಸಮಾನತೆಯ ಚರ್ಚೆಯೂ ನಡೆಯುತ್ತಿದೆ.

By Ravikumar - 05-07-2026


Ads in Post