ನವದೆಹಲಿ: ಲಡಾಖ್ ಹೋರಾಟಗಾರ ಸೋನಂ ವಾಂಗ್ಚುಕ್ ಅವರು ತಮ್ಮ ಉಪವಾಸ ಸತ್ಯಾಗ್ರಹದ ವೇಳೆ ನಡೆದ ಘಟನೆಗಳನ್ನು ನೆನಪಿಸಿಕೊಂಡು ರಾಜಕೀಯ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಉಪವಾಸವನ್ನು ಅಂತ್ಯಗೊಳಿಸುವ ಪ್ರಯತ್ನಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪಂದಿಸದಿರುವುದು ಬೇಸರ ತಂದಿದೆ ಎಂದು ಹೇಳಿದ್ದಾರೆ.
ಜಂತರ್ ಮಂತರ್ನಲ್ಲಿ ನಡೆದ 26 ದಿನಗಳ ಉಪವಾಸ ಸತ್ಯಾಗ್ರಹದ ವೇಳೆ, ಉಪವಾಸ ಅಂತ್ಯಗೊಳಿಸಲು ರಾಹುಲ್ ಗಾಂಧಿ ಜ್ಯೂಸ್ ನೀಡುವಂತೆ ತಮ್ಮ ಪತ್ನಿ ಗೀತಾಂಜಲಿ ಮನವಿ ಮಾಡಿದ್ದರು. ಆದರೆ ಆ ಪ್ರಯತ್ನ ಫಲಿಸಲಿಲ್ಲ ಎಂದು ವಾಂಗ್ಚುಕ್ ತಿಳಿಸಿದ್ದಾರೆ. ಇದೇ ವೇಳೆ, ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಕೆಲವು ಭರವಸೆಗಳನ್ನು ನೀಡಿದ್ದರೂ, ಅವು ಈಡೇರಲಿಲ್ಲ ಎಂದು ಆರೋಪಿಸಿದ ಅವರು, ಈ ಎಲ್ಲ ಬೆಳವಣಿಗೆಗಳ ಬಳಿಕ ಯಾವುದೇ ರಾಜಕೀಯ ಪಕ್ಷದ ಮೇಲೂ ನಂಬಿಕೆ ಉಳಿದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ವಿರುದ್ಧ ಹಲವು ಬಾರಿ ಟೀಕೆ ಮಾಡಿದಾಗ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಆದರೆ ಕಾಂಗ್ರೆಸ್ ಬಗ್ಗೆ ಪ್ರಶ್ನೆ ಎತ್ತಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟ್ರೋಲಿಂಗ್ಗೆ ಗುರಿಯಾಗಿದ್ದೇನೆ ಎಂದು ವಾಂಗ್ಚುಕ್ ಬೇಸರ ವ್ಯಕ್ತಪಡಿಸಿದ್ದಾರೆ. ಸೋನಂ ವಾಂಗ್ಚುಕ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಅವರ ಆರೋಪಗಳಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಂದ ಅಧಿಕೃತ ಪ್ರತಿಕ್ರಿಯೆ ಇನ್ನೂ ಬಂದಿಲ್ಲ.