Search


ಬಿಜೆಪಿಯನ್ನ ನಾಶಪಡಿಸುವವರೆಗೂ ನಿವೃತ್ತಿ ಪಡೆಯಲ್ಲ; ಫೇಸ್ಬುಕ್ ಲೈವ್ ನಲ್ಲಿ ಗುಡುಗಿದ ದೀದಿ

ಕೋಲ್ಕತ್ತಾ: ರಾಜಕೀಯ ನಿವೃತ್ತಿ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮಾಜಿ ಸಿಎಂ ಮಮತಾ ಬ್ಯಾನರ್ಜಿ, ಬಿಜೆಪಿ ವಿರುದ್ಧದ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ಬಿಜೆಪಿಯ ಅಸ್ತಿತ್ವ ನಾಶವಾಗುವವರೆಗೂ ತಾವು ಹಿಂದೆ ಸರಿಯುವುದಿಲ್ಲ ಎಂದು ಸೋಮವಾರ ಗುಡುಗಿದ್ದಾರೆ.

ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ ಅವರು, ಸರ್ಕಾರ ಬದಲಾದ ಕೇವಲ ನಾಲ್ಕು ತಿಂಗಳಲ್ಲೇ ರಾಜ್ಯದ ಜನರು ಬಿಜೆಪಿಯ ನಿಜವಾದ ಮುಖವನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಜನಗಣತಿ ಪ್ರಕ್ರಿಯೆಯು ‘ರಾಷ್ಟ್ರೀಯ ಪೌರತ್ವ ನೋಂದಣಿ’ಯನ್ನು ಜಾರಿಗೆ ತರುವ ಮತ್ತೊಂದು ಪರೋಕ್ಷ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ.

ರಾಜಕೀಯ ಪಕ್ಷಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಈ ಪ್ರಕ್ರಿಯೆಯನ್ನು ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಜನಗಣತಿ ನಮೂನೆಗಳಿಗೆ ಸಹಿ ಮಾಡುವ ಮೊದಲು ಹಾಗೂ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಮಮತಾ ಬ್ಯಾನರ್ಜಿ ಸಲಹೆ ನೀಡಿದ್ದಾರೆ.

ಮಹಿಳೆಯರಿಗೆ ಅನ್ನಪೂರ್ಣ ಭಂಡಾರ್ ಆರ್ಥಿಕ ನೆರವು ಯೋಜನೆಯಡಿ ಹಣ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವ ನಡುವೆಯೇ, ಬಿಜೆಪಿ ಸರ್ಕಾರವು ಅನರ್ಹತೆಯ ನೆಪದಲ್ಲಿ ಫಲಾನುಭವಿಗಳ ಸಂಖ್ಯೆಯನ್ನು ಕಡಿತಗೊಳಿಸುತ್ತಿದೆ ಎಂದು ಕಿಡಿಕಾರಿದ್ದಾರೆ. ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ನಾವು ಲಕ್ಷ್ಮಿರ್ ಭಂಡಾರ್ ಯೋಜನೆಯನ್ನು ಆರಂಭಿಸಿದ್ದೇವೆ. ಆದರೆ ಅನ್ನಪೂರ್ಣ ಭಂಡಾರ್ ಯೋಜನೆಯ ಹಣ ವಿತರಣೆಯಲ್ಲಿ ಬಿಜೆಪಿ ಸರ್ಕಾರ ಧರ್ಮ ಮತ್ತು ಜನಾಂಗವನ್ನು ಪರಿಗಣಿಸುತ್ತಿದೆ ಎಂದು ಮಮತಾ ಆರೋಪಿಸಿದ್ದಾರೆ.

ಇದೇ ವೇಳೆ ಜಾದವ್‌ಪುರ ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಹಾಗೂ ಎಡಪಂಥೀಯ ವಿದ್ಯಾರ್ಥಿಗಳ ನಡುವೆ ಸಂಘರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಆವರಣದಲ್ಲಿ ನಡೆದ ದಾಂಧಲೆಯನ್ನು ಬಿಜೆಪಿಯೇ ನಡೆಸಿದೆ ಎಂದು ಆರೋಪಿಸಿದ್ದಾರೆ. ಅಲ್ಲಿನ ಕೆಲವು ವಿದ್ಯಾರ್ಥಿಗಳೊಂದಿಗೆ ನಮಗೆ ಭಿನ್ನಾಭಿಪ್ರಾಯಗಳಿದ್ದರೂ, ಅವರನ್ನು ನಾವು ಗೌರವಿಸುತ್ತೇವೆ ಎಂದು ಹೇಳಿದ್ದಾರೆ.

ಟಿಎಂಸಿ ಬಂಡಾಯ ಶಾಸಕ ಖಾಸಿಂ ಸಿದ್ದಿಕಿ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದು, ಸೋಮವಾರ ಮಮತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ ಮರಳುವುದಾಗಿ ಘೋಷಿಸಿದ್ದಾರೆ. ಇನ್ನು ಮುಂದೆ ಮಮತಾ ಬ್ಯಾನರ್ಜಿ ಅವರ ನಾಯಕತ್ವದಲ್ಲೇ ಮುಂದುವರಿಯುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ಅಮ್ದಂಗಾ ಕ್ಷೇತ್ರದ ಟಿಎಂಸಿ ಶಾಸಕರಾಗಿರುವ ಖಾಸಿಂ ಸಿದ್ದಿಕಿ, ಚುನಾವಣೆಯ ಬಳಿಕ ವಿರೋಧ ಪಕ್ಷದ ನಾಯಕ ರಿತಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣಕ್ಕೆ ಸೇರ್ಪಡೆಯಾಗಿದ್ದರು. ಆದರೆ, ಕೆಲ ತಿಂಗಳ ಬಳಿಕ ಅವರು ಮತ್ತೆ ಮಮತಾ ಬ್ಯಾನರ್ಜಿ ಬಣಕ್ಕೆ ಮರಳಿದ್ದಾರೆ.

By Ravikumar - 25-08-2026


Ads in Post