Search


ʻವಿಡಿಯೋ ಮಾಡೋದು ಬಿಟ್ಟು ನನ್ನ ಮಗನನ್ನ ಉಳಿಸಬಹುದಿತ್ತುʼ: ಉತ್ತರ ಪ್ರದೇಶದ ಕರುಣಾಜನಕ ಸ್ಟೋರಿ..!

ಲಕ್ನೋ: ಕೋಚಿಂಗ್‌ ಸೆಂಟರ್‌ಗೆ ಬೆಂಕಿ ಹೊತ್ತಿಕೊಂಡು 15 ಜನ ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ನಿನ್ನೆ ಉತ್ತರ ಪ್ರದೇಶದಲ್ಲಿ ಸಂಭವಿಸಿತ್ತು. ಇದೀಗ ಈ ಘಟನೆಯ ಕರುಣಾಜನಕ ಕಥೆಗಳು ಒಂದೊಂದಾಗಿ ಹೊರಗೆ ಬರ್ತಿದ್ದು. ಮೃತ ಯುವಕನ ತಾಯಿಯೊಬ್ಬರು ಸಮಾಜದ ಸಂವೇದನೆಯನ್ನ ಪ್ರಶ್ನೆ ಮಾಡಿದ್ದಾರೆ, "ಬೆಂಕಿ ಹೊತ್ತಿದ್ದನು ನೋಡುತ್ತಾ, ವಿಡಿಯೋ ಮಾಡುವ ಬದಲು, ಯಾರಾದರು ರಕ್ಷಣೆ ಮಾಡಲು ಮುಂದಾಗಿದ್ದರೆ, ನನ್ನ ಮಗ ಬದುಕಿರುತ್ತಿದ್ದ" ಎಂದು ಕಣ್ಣೀರು ಹಾಕಿದ್ದಾರೆ. 

ಲಕ್ನೋದ ಅಲಿಗಂಜ್ ಪ್ರದೇಶದಲ್ಲಿದ್ದ ಕೋಚಿಂಗ್ ಸೆಂಟರ್‌ನಲ್ಲಿ ನಿನ್ನೆ ಬೆಂಕಿ ಅವಘಡ ಸಂಭವಿಸತ್ತು. ಮೊದಲು ನೆಲ ಮಹಡಿಯಲ್ಲಿದ್ದ ಪೆಟ್‌ ಶಾಪ್‌ನಲ್ಲಿ ಹೊತ್ತಿಕೊಂಡ ಬೆಂಕಿ, ಇಡೀ ಕಟ್ಟಡವನ್ನ ವ್ಯಾಪಿಸಿತ್ತು, ಬೆಂಕಿಯ ತೀವ್ರತೆಗೆ ಕೋಚಿಂಗ್‌ ಸೆಂಟರ್‌ನಲ್ಲಿದ್ದ 15 ಮಂದಿ ಸಜೀವ ದಹನವಾಗಿದ್ದರು. ಜೊತೆಗೆ 24 ಮಂದಿ ಗಾಯಗೊಂಡಿದ್ದರು. ಇನ್ನು ಕೆಲವು ಯುವಕರು ಪ್ರಾಣ ಉಳಿಸಿಕೊಳ್ಳಲು ಕಟ್ಟಡದ ಮೇಲಿಂದ ಕೆಳಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದರು, ಈ ಕುರಿತಾದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

ವಿಡಿಯೋ ಮಾಡೋದು ಬಿಟ್ಟು, ರಕ್ಷಣೆ ಮಾಡ್ಬೋದಿತ್ತು..!

ಮೃತ ಯುವಕ ಆದಿತ್ಯ ಎಂಬಾತನ ತಾಯಿ ಮಾಧ್ಯಮದೊಂದಿಗೆ ಮಾತನಾಡಿದ್ದು, " ಸುಮಾರು ಎರಡೂವರೆ ಗಂಟೆಗಳ ಕಾಲ ಕಟ್ಟಡದಲ್ಲಿ ಆವರಿಸಿದ್ದ ದಟ್ಟ ಹೊಗೆಯೊಳಗೆ ನನ್ನ ಮಗ ಸಿಲುಕಿಕೊಂಡಿದ್ದ. ಅಲ್ಲಿ ನೆರೆದಿದ್ದ ಜನರು ವಿಡಿಯೋ ಮಾಡುವುದನ್ನು ಬಿಟ್ಟು, ಸ್ವಲ್ಪ ಮುಂಚಿತವಾಗಿ ಸಹಾಯ ಮಾಡಿದ್ದರೆ ನನ್ನ ಮಗ ಬದುಕುಳಿಯುತ್ತಿದ್ದ ಎಂದು ಕಣ್ಣೀರು ಹಾಕಿದ್ದಾರೆ. ಇದೇ ಕಟ್ಟಡದಲ್ಲಿ ಐಟಿ ಟೆಕ್ನೀಶಿಯನ್‌ ಆಗಿ ಕೆಲಸ ಮಾಡ್ತಿದ್ದ ಅಬ್ದುಲ್‌ ಎಂಬಾತನ ಕುಟುಂಬಸ್ಥರು ಮಾತನಾಡಿದ್ದು " ನಮ್ಮ ಕುಟುಂಬಕ್ಕೆ ಅಬ್ದುಲ್‌ ಆಧಾರವಾಗಿದ್ದ,  ತಂದೆಗೆ ಪಾರ್ಶ್ವವಾಯು ಆಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಕೇವಲ 8-10 ತಿಂಗಳ ಹಿಂದೆಯಷ್ಟೇ ಅಬ್ದುಲ್ ಕೆಲಸಕ್ಕೆ ಸೇರಿದ್ದ. ಸದ್ಯ ವಯಸ್ಸಾದ ಪೋಷಕರು ಒಂಟಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಸಾಯುವ ಮುನ್ನ ಕಾಪಾಡು ಬಾ ಎಂದು ತಂದೆಗೆ ಕರೆ..!

ಇದೇ ಕೋಚಿಂಗ್‌ ಸೆಂಟರ್‌ನಲ್ಲಿದ್ದ ಮತ್ತೊಬ್ಬ ಯುವಕ  ಸುಖಮಣಿ ಸಿಂಗ್ ಎಂಬಾತ  ಮಧ್ಯಾಹ್ನ 2:15ರ ಸುಮಾರಿಗೆ ತನ್ನ ತಂದೆಗೆ ಕರೆ ಮಾಡಿ "ಅಪ್ಪ ಕೋಚಿಂಗ್ ಸೆಂಟರ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ನನ್ನನ್ನು ಕಾಪಾಡು ಬಾ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ. ಆದರೆ ತಂದೆ ಪ್ರಭ್ಜೋತ್ ಸಿಂಗ್ ಅವರು ಸರಿಯಾದ ಸಮಯಕ್ಕೆ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಲಕ್ನೋ ಅಭಿವೃದ್ಧಿ ಪ್ರಾಧಿಕಾರದ ಇಬ್ಬರು, ವಿದ್ಯುತ್ ಇಲಾಖೆಯ ಒಬ್ಬರು ಮತ್ತು ಅಗ್ನಿಶಾಮಕ ದಳದ ಒಬ್ಬರು ಸೇರಿದಂತೆ ನಾಲ್ಕು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಇನ್ನೂ ಈ ಸಂಬಂಧ ಎಸ್‌ಐಟಿ ತನಿಖೆ ಆರಂಭಿಸಿದ್ದು, ಕಟ್ಟಡದ ಜಂಟಿ ಮಾಲೀಕರಾದ ರಾಮ್ ಕೃಷ್ಣ ಉಪಾಧ್ಯಾಯ, ವೀರೇಂದ್ರ ಪ್ರಸಾದ್ ಶುಕ್ಲಾ, ತುಷಾರ್ ಕೃಷ್ಣ ಜೈಸ್ವಾಲ್ ಮತ್ತು ಸುರೇಶ್ ಕುಮಾರ್ ಸಾಹು ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

By Ravikumar - 23-06-2026


Ads in Post