Search


200 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗು ಜನನ; ರಾಜಕುಮಾರಿಯಂತೆ ಮನೆಗೆ ಸ್ವಾಗತ

ಹೆಣ್ಣು ಮಗು ಹುಟ್ಟಿದರೆ ಇಂದಿಗೂ ಕೆಲವೆಡೆ ನಿರಾಸೆ ವ್ಯಕ್ತಪಡಿಸುವ ಮನೋಭಾವ ಇರುವ ನಡುವೆಯೇ, ಮಹಾರಾಷ್ಟ್ರದ ಒಂದು ಕುಟುಂಬ ಹೆಣ್ಣು ಮಗುವಿನ ಜನನವನ್ನು ಅದ್ಧೂರಿಯಾಗಿ ಸಂಭ್ರಮಿಸಿ ಗಮನ ಸೆಳೆದಿದೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪಾರ್ಲಿಯ ದಹಿಫಳೆ ಕುಟುಂಬದಲ್ಲಿ ಬರೋಬ್ಬರಿ ಐದು ತಲೆಮಾರುಗಳ, ಅಂದರೆ ಸುಮಾರು 200 ವರ್ಷಗಳ ಬಳಿಕ ಹೆಣ್ಣು ಮಗುವೊಂದು ಜನಿಸಿದೆ. ಈ ಅಪರೂಪದ ಸಂಭ್ರಮವನ್ನು ಕುಟುಂಬಸ್ಥರು ರಾಜಕುಮಾರಿಯ ಆಗಮನದಂತೆ ಆಚರಿಸಿದ್ದಾರೆ.

ನವಜಾತ ಶಿಶು ಹಾಗೂ ತಾಯಿ ಕಲ್ಪನಾ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮನೆಗೆ ಕರೆತರಲು ಕುಟುಂಬಸ್ಥರು ವಿಶೇಷ ಸಾಂಪ್ರದಾಯಿಕ ಮೆರವಣಿಗೆ ಆಯೋಜಿಸಿದ್ದರು. ಹೂವುಗಳಿಂದ ಅಲಂಕರಿಸಿದ ಭವ್ಯ ರಥದಲ್ಲಿ ಮಗುವನ್ನು ಕರೆತರಲಾಗಿದ್ದು, ಡೊಳ್ಳು-ತಮಟೆಗಳ ನಾದ, ಬ್ಯಾಂಡ್ ಸಂಗೀತದೊಂದಿಗೆ ಅದ್ಧೂರಿ ಸ್ವಾಗತ ನೀಡಲಾಯಿತು.

ದಹಿಫಳೆ ಕುಟುಂಬದ ಮೂಲ ಗ್ರಾಮ ಲಾತೂರ್ ಜಿಲ್ಲೆಯ ಅಹ್ಮದ್‌ಪುರ ತಾಲೂಕಿನ ಕೋಲ್ವಾಡಿಯಾಗಿದೆ. ಕುಟುಂಬದಲ್ಲಿ ಕಳೆದ ಸುಮಾರು 200 ವರ್ಷಗಳಿಂದ ಗಂಡು ಮಕ್ಕಳೇ ಜನಿಸುತ್ತಿದ್ದು, ಹೆಣ್ಣು ಮಗುವಿನ ಆಗಮನಕ್ಕಾಗಿ ಕುಟುಂಬಸ್ಥರು ಬಹಳ ವರ್ಷಗಳಿಂದ ಕಾಯುತ್ತಿದ್ದರು ಎನ್ನಲಾಗಿದೆ. ಮಗುವಿನ ಅಜ್ಜ ಲಿಂಬಾಜಿ ದಹಿಫಳೆ ಸಂತಸ ವ್ಯಕ್ತಪಡಿಸಿ, “ನಮ್ಮ ಕುಟುಂಬದಲ್ಲಿ ಹೆಣ್ಣು ಮಗು ಜನಿಸಿರುವುದು ನಮ್ಮ ಅದೃಷ್ಟ. ಇಷ್ಟು ವರ್ಷಗಳಿಂದ ಕುಟುಂಬದಲ್ಲಿ ಹೆಣ್ಣು ಮಗು ಇಲ್ಲ ಎಂಬ ಕೊರಗು ಇತ್ತು. ಈಗ ನಮ್ಮ ಮನೆಗೆ ಲಕ್ಷ್ಮಿ ಬಂದಿದ್ದಾಳೆ” ಎಂದು ಭಾವುಕರಾದರು.

ಇದೇ ವೇಳೆ ಮಗುವಿನ ತಂದೆ ಋಷಿಕೇಶ್ ದಹಿಫಳೆ ಮಾತನಾಡಿ, “ಸಾಮಾನ್ಯವಾಗಿ ಅನೇಕರು ಗಂಡು ಮಗುವಿಗಾಗಿ ಹಂಬಲಿಸುತ್ತಾರೆ. ಆದರೆ ಹೆಣ್ಣು ಮಗು ಹುಟ್ಟಿದಾಗ ಸಿಗುವ ಸಂತೋಷವೇ ವಿಭಿನ್ನ. ಹೆಣ್ಣು ಮಕ್ಕಳು ತಂದೆಗೆ ಬಹಳ ಹತ್ತಿರವಾಗಿರುತ್ತಾರೆ. ನಮ್ಮ ಮಗಳನ್ನು ಹೂವಿನಂತೆ ಪ್ರೀತಿಯಿಂದ ಸಾಕಿ ಬೆಳೆಸುತ್ತೇವೆ” ಎಂದು ಸಂತಸ ಹಂಚಿಕೊಂಡಿದ್ದಾರೆ. ಐದು ತಲೆಮಾರುಗಳ ಬಳಿಕ ಕುಟುಂಬಕ್ಕೆ ಬಂದಿರುವ ಈ ಹೆಣ್ಣು ಮಗುವಿನ ಆಗಮನ ಇದೀಗ ದಹಿಫಳೆ ಕುಟುಂಬದಲ್ಲಿ ಸಂಭ್ರಮದ ವಾತಾವರಣ ಮೂಡಿಸಿದೆ.

By Ravikumar - 03-09-2026


Ads in Post