Search


ʻತುಳಿತಾರೆ ತುಳಿಸ್ಕೋಬೇಕುʼ: ಡಿಕೆ ಸಿಎಂ ಆದ ಬೆನ್ನಲ್ಲೇ ಪರಮೇಶ್ವರ್‌ ಸ್ಪೋಟಕ ವಿಡಿಯೋ ವೈರಲ್‌

ತುಮಕೂರು: ಡಿಕೆ ಶಿವಕುಮಾರ್‌ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಕ್ಷಣಗಣನೆ ಆರಂಭವಾಗಿದ್ದು, ಇದರ ನಡುವೆ ಸೋಷಿಯಲ್‌ ಮೀಡಿಯಾದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್‌ ಅವರ ವಿಡಿಯೋ ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿ ಪರಂ ತಮಗೆ ಮುಖ್ಯಮಂತ್ರಿ ಕುರ್ಚಿ ಕೈ ತಪ್ಪಿದಕ್ಕೆ ಬೇಸರ ವ್ಯಕ್ತಪಡಿಸಿದ್ದು, ರಾಜಕೀಯವಾಗಿ ದಲಿತರನ್ನ ತುಳಿಯುತ್ತಿದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಡಾ. ಜಿ. ಪರಮೇಶ್ವರ್ (G Parameshwara) ಅವರಿಗೆ ಮತ್ತೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿರುವುದಕ್ಕೆ ಅವರ ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನ ಮೂಡಿದೆ. ಇತ್ತೀಚೆಗಷ್ಟೇ ಪರಮೇಶ್ವರ್ ಅವರನ್ನು ಮಹಾಭಾರತದ ‘ಕರ್ಣ’ನಿಗೆ ಹೋಲಿಸಿ ವಿಡಿಯೋ ಮಾಡಿದ್ದ ಅಭಿಮಾನಿಗಳು, ಈಗ ಅವರ ಹಳೆಯ ಮಾರ್ಮಿಕ ಭಾಷಣದ ಮತ್ತೊಂದು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಮಾಣದಲ್ಲಿ ವೈರಲ್ ಮಾಡುತ್ತಿದ್ದಾರೆ.

ವೈರಲ್‌ ವಿಡಿಯೋದಲ್ಲಿ ಏನಿದೆ..!

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಡಾ. ಜಿ. ಪರಮೇಶ್ವರ್ ಅವರು ಸಮುದಾಯದ ಹೋರಾಟ ಹಾಗೂ ರಾಜಕೀಯ ಅನ್ಯಾಯದ ಕುರಿತು ಅತ್ಯಂತ ಬೇಸರದಿಂದ ಮಾತನಾಡಿದ್ದಾರೆ. ‘ತುಳಿತಾರೆ, ತುಳಿಸಿಕೊಳ್ಳಬೇಕು. ಆದರೆ ಎಷ್ಟು ಬಾರಿ ಅಂತ ತುಳಿಸಿಕೊಳ್ಳಬೇಕು? ನಮ್ಮ ಹಿರಿಯಣ್ಣ ಮಲ್ಲಿಕಾರ್ಜುನ ಖರ್ಗೆ ಅವರು ಒಂದು ಕಾಲು ಎತ್ತಿ ಇಟ್ಟಿದ್ದರೆ ಮುಖ್ಯಮಂತ್ರಿ ಆಗುತ್ತಿದ್ದರು ಕಣ್ರೀ. ಆದರೆ ಅವರು ತಪ್ಪಿಸಿಕೊಂಡರು. ಇನ್ನು ನನಗೆ ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ತಪ್ಪಿ ಹೋಯಿತು. ಅಪ್ಪಾ! ಹಂಗೂ ಹಿಂಗೂ ಹೆಂಗೋ ಮಾಡಿಕೊಂಡು, ಕೊನೆಗೆ ಬೇಡ ಬೇಡ ಅಂದರೂ ನನ್ನನ್ನು ಉಪಮುಖ್ಯಮಂತ್ರಿ ಮಾಡಿದರು. ಆದರೆ ಇಂತಹ ಸ್ಥಿತಿಯನ್ನು ಎದುರಿಸಲು ಹೋರಾಟ ಎನ್ನುವುದು ನಿಮ್ಮಲ್ಲಿ ಪ್ರತಿಯೊಬ್ಬನಿಗೂ ಬರಬೇಕು’ ಎಂದು ಪರಮೇಶ್ವರ್ ಭಾಷಣ ಮಾಡುತ್ತಿರುವುದು ವಿಡಿಯೋದಲ್ಲಿವೆ.

ಕಾಂಗ್ರೆಸ್‌ ಕೈಬಿಡ್ತಾರಾ ದಲಿತರು...!

ಅಹಿಂದ ಹೋರಾಟದ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಸಿದ್ದರಾಮಯ್ಯನವರ ರಾಜೀನಾಮೆಯಿಂದ ಅಹಿಂದ ಮತಗಳು ಚದುರುವ ಆತಂಕ ಕಾಂಗ್ರೆಸ್‌ನಲ್ಲಿದೆ, ಇದರ ಜೊತೆಗೆ ಮಲ್ಲಿಕಾರ್ಜುನ್‌ ಖರ್ಗೆ, ಪರಮೇಶ್ವರ್‌, ರಾಜಣ್ಣ ಸೇರಿದಂತೆ ಹಲವು ದಲಿತ ನಾಯಕರಿಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್‌ನಲ್ಲೇ ಒಡಕು ಸೃಷ್ಟಿಯಾದರೆ, ಮುಂದಿನ ದಿನಗಳಲ್ಲಿ ದಲಿತ ಮತಗಳು ಕಾಂಗ್ರೆಸ್‌ನಿಂದ ದೂರ ಸರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

By Ravikumar - 02-06-2026


Ads in Post