ಚಂಡೀಗಢ: ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಸಿದ್ಧಪಡಿಸಲಾಗಿರುವ ಪಂಜಾಬ್ನ ಕರಡು ಮತದಾರರ ಪಟ್ಟಿಯಿಂದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರ ಹೆಸರನ್ನು ತೆಗೆದುಹಾಕಲಾಗಿದೆ. ಅವರ ಹೆಸರಿನ ಎದುರು ‘ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ’ ಎಂದು ಉಲ್ಲೇಖಿಸಿರುವುದಕ್ಕೆ ಚಡ್ಡಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದನ್ನು ರಾಜಕೀಯ ಸೇಡು ಎಂದು ಆರೋಪಿಸಿದ್ದಾರೆ.
ಆಗಸ್ಟ್ 13ರಂದು ಪ್ರಕಟವಾದ ‘ಅನುಪಸ್ಥಿತ, ಸ್ಥಳಾಂತರಗೊಂಡ, ಮೃತ ಮತ್ತು ನಕಲಿ’ (ASDD) ಪಟ್ಟಿಯಲ್ಲಿ ರಾಘವ್ ಚಡ್ಡಾ ಅವರ ಹೆಸರೂ ಸೇರಿದೆ. ಅವರ ಹೆಸರಿನ ಎದುರು ‘ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ’ ಎಂಬ ಕಾರಣವನ್ನು ದಾಖಲಿಸಲಾಗಿದೆ. SIR ಪೂರ್ವದ ಮತದಾರರ ಪಟ್ಟಿಯಲ್ಲಿದ್ದ ಸುಮಾರು ಶೇ.9.7ರಷ್ಟು ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಿಳಿದುಬಂದಿದೆ. ಅಂದರೆ ಸುಮಾರು 20.66 ಲಕ್ಷ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿದಿದ್ದು, ಈ ಪೈಕಿ ಚಡ್ಡಾ ಅವರ ಹೆಸರೂ ಸೇರಿದೆ.
ತಮ್ಮ ಮತದಾರರ ಗುರುತಿನ ಚೀಟಿ ಮೊಹಾಲಿಯಲ್ಲಿ ನೋಂದಣಿಯಾಗಿರುವಾಗ ತಮ್ಮನ್ನು ‘ಶಾಶ್ವತವಾಗಿ ಸ್ಥಳಾಂತರಗೊಂಡವರು’ ಎಂದು ಏಕೆ ಗುರುತಿಸಲಾಗಿದೆ ಎಂದು ರಾಘವ್ ಚಡ್ಡಾ ಪ್ರಶ್ನಿಸಿದ್ದಾರೆ. ಪ್ರಸ್ತುತ ಮತದಾರರ ಪಟ್ಟಿ ಇನ್ನೂ ಕರಡು ಹಂತದಲ್ಲಿದ್ದು, SIR ಮಾರ್ಗಸೂಚಿಗಳ ಅಡಿಯಲ್ಲಿ ಲಭ್ಯವಿರುವ ಪರಿಹಾರ ಕ್ರಮಗಳನ್ನು ತಾವು ಈಗಾಗಲೇ ಬಳಸಿಕೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಎಎಪಿ ವಿರುದ್ಧ ವಾಗ್ದಾಳಿ ನಡೆಸಿರುವ ಚಡ್ಡಾ, ಪಕ್ಷವನ್ನು ತೊರೆದ ನಂತರ ತಮ್ಮ ವಿರುದ್ಧ ರಾಜಕೀಯವಾಗಿ ಸೇಡು ತೀರಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಎಎಪಿಯನ್ನು ತೊರೆದವರ ವಿರುದ್ಧ ಪಂಜಾಬ್ ಪೊಲೀಸ್ ಹಾಗೂ ರಾಜ್ಯದ ಆಡಳಿತ ಯಂತ್ರವನ್ನು ಬಳಸಲಾಗುತ್ತಿದೆ ಎಂದೂ ಅವರು ದೂರಿದ್ದಾರೆ. “ಮೌನವಾಗಿರಲು ನಿರಾಕರಿಸಿದವರ ವಿರುದ್ಧ ಪಂಜಾಬ್ ಪೊಲೀಸ್ ಮತ್ತು ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆಯನ್ನು ಬಳಸಲಾಗುತ್ತಿದೆ. ಎಎಪಿ ತೊರೆದು ಬಿಜೆಪಿಗೆ ಸೇರಿದ ಇತರ ರಾಜ್ಯಸಭಾ ಸದಸ್ಯರನ್ನೂ ಗುರಿಯಾಗಿಸಲಾಗುತ್ತಿದೆ. ನನ್ನ ಹೆಸರನ್ನು ತಪ್ಪಾಗಿ ವರ್ಗೀಕರಿಸಿರುವುದು ಇದೇ ರಾಜಕೀಯ ಸೇಡಿನ ಮತ್ತೊಂದು ಉದಾಹರಣೆ” ಎಂದು ಚಡ್ಡಾ ಆರೋಪಿಸಿದ್ದಾರೆ.
AAP ತೊರೆದು BJP ಸೇರಿದ್ದ ಚಡ್ಡಾ..!
ಇನ್ನು 37 ವರ್ಷದ ರಾಘವ್ ಚಡ್ಡಾ ಅವರು 2022ರಲ್ಲಿ ಪಂಜಾಬ್ನಿಂದ ಎಎಪಿ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಈ ವರ್ಷದ ಏಪ್ರಿಲ್ನಲ್ಲಿ ಎಎಪಿ ತೊರೆದು ಇತರ ಆರು ರಾಜ್ಯಸಭಾ ಸದಸ್ಯರೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿದ್ದರು.ಪಕ್ಷ ತೊರೆಯುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಚಡ್ಡಾ, ಎಎಪಿ ತನ್ನ ಮೂಲ ತತ್ವಗಳು, ಮೌಲ್ಯಗಳು ಮತ್ತು ನೈತಿಕತೆಯಿಂದ ದೂರ ಸರಿದಿದೆ ಎಂದು ಆರೋಪಿಸಿದ್ದರು. ಆದರೆ, ಅವರನ್ನು ‘ಅವಕಾಶವಾದಿ’ ಎಂದು ಎಎಪಿ ಟೀಕಿಸಿತ್ತು. ಪ್ರಮುಖ ರಾಜಕೀಯ ಹೋರಾಟಗಳು ಮತ್ತು ಪ್ರತಿಭಟನೆಗಳಲ್ಲಿ ಅವರ ಗೈರುಹಾಜರಿಯ ಬಗ್ಗೆಯೂ ಪಕ್ಷ ಪ್ರಶ್ನೆ ಎತ್ತಿತ್ತು.
SIR ಪ್ರಕ್ರಿಯೆಗೆ ಸಂಬಂಧಿಸಿದಂತೆ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸೆಪ್ಟೆಂಬರ್ 12ರವರೆಗೆ ಅವಕಾಶ ನೀಡಲಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 2026ರಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.