ಲಕ್ನೋ: ಹಿಂದೂ ಸಮಾಜದ ಅತಿದೊಡ್ಡ ಶ್ರದ್ದಾಕೇಂದ್ರ, ರಾಮ ಮಂದಿರದಲ್ಲಿ(Ram Mandir Donation) ನಡೆದ ಕಳ್ಳತನ ಪ್ರಕರಣ ಕುರಿತು ಎಸ್‌ಐಟಿ ಪ್ರಾಥಮಿಕ ವರದಿ ನೀಡಿದೆ. ಈ ವರದಿಯಲ್ಲಿ ಹಲವಾರು ಸಂಗತಿಗಳು ಬಯಲಾಗಿದ್ದು. ದೇವಾಲಯದಲ್ಲಿ 42 ದಿನಗಳಲ್ಲಿ ಸುಮಾರು 70 ಬಾರಿ ಕಳ್ಳತನ ನಡೆದಿರುವ ಬಗ್ಗೆ ಎಸ್‌ಐಟಿಗೆ ಬಲವಾದ ಸಾಕ್ಷ್ಯ ಲಭ್ಯವಾಗಿದೆ.
ದೇವಾಲಯದಲ್ಲಿ ಸುಮಾರು 7.5 ಕೋಟಿ ರೂ. ಕಾಣೆಯಾಗಿರುವ ಗಂಭೀರ ಆರೋಪ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್‌ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಎಂಬುವವರನ್ನ ಬಂಧಿಸಲಾಗಿದೆ.
ಎಸ್‌ಐಟಿಯ (SIT) ತನಿಖೆಯು ಕಳ್ಳತನ ಮತ್ತು ದುರುಪಯೋಗಕ್ಕೆ ಸಂಬಂಧಿಸಿದ ನಿರ್ಣಾಯಕ ಪುರಾವೆಗಳನ್ನು ಬಹಿರಂಗಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಏಪ್ರಿಲ್ 27 ರಿಂದ ಜೂನ್ 5 ರವರೆಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಎಸ್‌ಐಟಿ ಕೂಲಂಕಷವಾಗಿ ಪರಿಶೀಲಿಸಿತು. ಇದಲ್ಲದೆ, ಕಾಣಿಕೆ ಮತ್ತು ದೇಣಿಗೆ ಎಣಿಕೆ ಕೋಣೆಯ ನಗದು ಎಣಿಕೆ ಮತ್ತು ನಿರ್ವಹಣೆಯಲ್ಲಿ ಹಲವಾರು ನ್ಯೂನತೆಗಳು ತನಿಖೆ ವೇಳೆ ಬಹಿರಂಗವಾಗಿವೆ.
ಈ ವೀಡಿಯೋ ಆಧರಿಸಿಯೇ 8 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಲಾಗಿದೆ. ಎಸ್‌ಐಟಿ ಆಡಿಟ್ ರಿಪೋರ್ಟ್ ಪರಿಶೀಲಿಸಿದೆ. 2022-23, 2023-24, 2024-25 ಹಣಕಾಸು ವರ್ಷಗಳ ಆಂತರಿಕ ಲೆಕ್ಕ ಪರಿಶೋಧನೆ ವೇಳೆ ಹಲವು ನ್ಯೂನತೆಗಳು ಪತ್ತೆಯಾಗಿವೆ. ದಾಖಲೆಗಳು ಹಾಗೂ ಹುಂಡಿಗಳ ಸಂಖ್ಯೆಯ ನಡುವೆಯೂ ವ್ಯತ್ಯಾಸ ಕಂಡುಬಂದಿದೆ. ಸಿಸಿಟಿವಿ ವ್ಯಾಪ್ತಿ, ಭದ್ರತಾ ಪ್ರೋಟೋಕಾಲ್ ಕೇವಲ ಕಾಗದದಲ್ಲಿತ್ತೇ ವಿನಃ ಯಾವುದೂ ಜಾರಿಯಾಗಿರಲಿಲ್ಲ ಎನ್ನುವುದು ಎಸ್‌ಐಟಿ ವರದಿಯಲ್ಲಿ ಉಲ್ಲೇಖಿಸಲಾಗಿದೆ