Search


ಪುತ್ರನ ಸಮೇತ ರಾಹುಲ್‌ ಗಾಂಧಿಯನ್ನ ಭೇಟಿಯಾದ ಸಿದ್ದರಾಮಯ್ಯ..!

ದೆಹಲಿ : ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಸಿದ್ದರಾಮಯ್ಯ ಅವರು ಇಂದು (ಶುಕ್ರವಾರ) ಬೆಳಗ್ಗೆ ದೆಹಲಿಯ 10 ಜನಪಥ್ ನಿವಾಸದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್‌ ಮತ್ತು ಕರ್ನಾಟಕ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲ ಹಾಜರಿದ್ದರು.

ಸಿದ್ದರಾಮಯ್ಯ ಅವರು ತಮ್ಮ ಪುತ್ರ ಯತೀಂದ್ರ ಅವರೊಂದಿಗೆ ಹೈಕಮಾಂಡ್‌ ನಾಯಕರನ್ನ ಭೇಟಿ ಮಾಡಿದ್ದು, ಪಕ್ಷದ ನಾಯಕತ್ವದಲ್ಲಿ ತಮ್ಮ ಭವಿಷ್ಯದ ಪಾತ್ರ ಕುರಿತು ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸಿದ್ದರಾಮಯ್ಯ ಅವರು ಈಗಾಗಲೇ ರಾಜ್ಯಸಭಾ ಸ್ಥಾನವನ್ನು ನಿರಾಕರಿಸಿ, ಕೇಂದ್ರದಲ್ಲಿ ಹುದ್ದೆ ಸ್ವೀಕರಿಸುವ ಬದಲು ಕರ್ನಾಟಕ ರಾಜಕಾರಣದಲ್ಲಿ ಸಕ್ರಿಯವಾಗಿಯೇ ಉಳಿಯಲು ಬಯಸಿದ್ದು ಇದರಿಂದಾಗಿ ಈ ಭೇಟಿ ಹೆಚ್ಚು ಕುತೂಹಲ ಮೂಡಿಸಿದೆ. 

ಜೊತೆಗೆ ಜೆಡಿಎಸ್ ಪಕ್ಷವನ್ನು ತೊರೆದು 2006ರಲ್ಲಿ ಕಾಂಗ್ರೆಸ್‌ಗೆ ಸೇರಿದ ಬಳಿಕ ಕರ್ನಾಟಕದ ನಾಯಕತ್ವವನ್ನು ತಮ್ಮ ಮೇಲೆ ನಂಬಿಕೆ ಇಟ್ಟು ಒಪ್ಪಿಸಿದಕ್ಕಾಗಿ ಸೋನಿಯಾ ಗಾಂಧಿಗೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದ್ದು. ಕರ್ನಾಟಕದ ನೂತನ ಸರ್ಕಾರದಲ್ಲಿ ತಮ್ಮ ಪುತ್ರ ಹಾಗೂ ನಿಷ್ಠಾವಂತರಿಗೆ ಸಚಿವ ಸ್ಥಾನಗಳು, ಅದರಲ್ಲೂ ಉಪಮುಖ್ಯಮಂತ್ರಿ ಹುದ್ದೆ ನೀಡುವಂತೆ ಅವರು ಒತ್ತಾಯಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಸಿದ್ದು...!

ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಬಳಿಕ, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ಆಗಮಿಸಿದರು. ರಾಜಕೀಯ ಬದಲಾವಣೆ ಹಾಗೂ ಸರ್ಕಾರ ರಚನೆ ಕುರಿತು ಚರ್ಚಿಸಲು ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ.

ಇನ್ನೊಂದೆಡೆ, ರಾಜ್ಯಪಾಲ ಥಾವರಚಂದ್ ಗೆಹ್ಲೊಟ್ ಅವರು ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಸಿದ್ದರಾಮಯ್ಯ ಅವರ ಉತ್ತರಾಧಿಕಾರಿಯಾಗಿ ಮುಖ್ಯಮಂತ್ರಿ ಆಗುವ ನಿರೀಕ್ಷೆಯಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರ ರಚನೆ ಕುರಿತು ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಲಿದ್ದಾರೆ.

By Ravikumar - 29-05-2026


Ads in Post