ಧರ್ಮಸ್ಥಳ : ಕಳೆದ ವರ್ಷ ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿದ್ದ ಬುರುಡೆ ಕೇಸ್‌ನಲ್ಲಿ ದೊಡ್ಡ ಬೆಳವಣಿಗೆಯಾಗಿದೆ. ಇದ್ದಕ್ಕಿದ್ದಂತೆ ಬುರುಡೆ ಕೇಸ್‌ನ ಎಸ್‌ಐಟಿ ತಂಡ ಧರ್ಮಸ್ಥಳದ ಬಂಗ್ಲೆಗುಡ್ಡಕ್ಕೆ ಭೇಟಿ ನೀಡಿದ್ದು. FSL ತಂಡದ ಅಧಿಕಾರಿಗಳು ಮತ್ತೆ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಪ್ರಕರಣ ಎಸ್ಐಟಿಗೆ ವಹಿಸುವ ಮೊದಲು ಮಾನವನ ಬುರುಡೆ ತೆಗೆಯುವ ವಿಡಿಯೋ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಎಸ್‌ಐಟಿ ಅಧಿಕಾರಿಗಳು ಈ ಬುರುಡೆ ತೆಗೆದ ಸ್ಥಳದಲ್ಲಿ ಪರಿಶೀಲನೆ ಮುಂದಾಗಿದ್ದಾರೆ. ಬೆಂಗಳೂರಿನಿಂದ ಬಂದ ಮೂರು ಮಂದಿ ಎಫ್ಎಸ್ಎಲ್ ತಜ್ಞರ ತಂಡ, ಎಸ್‌ಐಟಿ ಅಧಿಕಾರಿಗಳೊಂದಿಗೆ ಬಂಗ್ಲಗುಡ್ಡೆ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ, ಬುರುಡೆ ಸಿಕ್ಕ ಜಾಗದಲ್ಲಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣ ಹಿನ್ನಲೆ....!
ಕಳೆದ ವರ್ಷ ಜೂನ್‌ನಲ್ಲಿ ಧರ್ಮಸ್ಥಳದಲ್ಲಿ ದೊಡ್ಡ ಹೈಡ್ರಾಮವೇ ನಡೆದಿತ್ತು. ಧರ್ಮಸ್ಥಳದಲ್ಲಿ ನೂರಾರು ಅಮಾಯಕ ಹೆಣ್ಣು ಮಕ್ಕಳನ್ನ ಅತ್ಯಾಚಾರ ಮಾಡಿ, ಕಾಡಿನಲ್ಲಿ ಹೂತು ಹಾಕಿದ್ದಾರೆ, ಎಂದು ಚಿನ್ನಯ್ಯ ಎಂಬಾತ ಮಾನವ ಬುರುಡೆಯೊಂದಿಗೆ ಬಂದು ನ್ಯಾಯಾಲಯದ ಮುಂದೆ ಶರಣಾಗಿದ್ದ. ಈ ಪ್ರಕರಣವನ್ನ ರಾಜ್ಯ ಸರ್ಕಾರ ಎಸ್‌ಐಟಿ ಹೆಗಲಿಗೆ ಹೊರಿಸಿತ್ತು.
ತನಿಖೆಗೆ ಇಳಿದ ಎಸ್‌ಐಟಿ ತಂಡ ಧರ್ಮಸ್ಥಳದ ಸುತ್ತ ಮುತ್ತಲಿನ 13 ಸ್ಥಳಗಳಲ್ಲಿ ಭೂಮಿಯನ್ನ ಅಗೆದು ಪರಿಶೀಲನೆ ನಡೆಸಿತ್ತು. ಆದರೆ ನಂತರದಲ್ಲಿ ಈ ಪ್ರಕರಣದಲ್ಲಿ ದೊಡ್ಡ ಷಡ್ಯಂತ್ರವಿರುವುದು ಬಯಲಾಗಿತ್ತು. ನಂತರದ ದಿನಗಳಲ್ಲಿ ಈ ಪ್ರಕರಣದಲ್ಲಿ ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣನವರ್, ಯೂಟ್ಯೂಬರ್ ಸಮೀರ್, ಸೇರಿದಂತೆ ಹಲವರ ವಿರುದ್ದ ಪ್ರಕರಣ ದಾಖಲಾಗಿತ್ತು.
ಆದರೆ ಇಂದು ಇದ್ದಕ್ಕಿದ್ದಂತೆ ಎಸ್‌ಐಟಿ ತಂಡ ಮತ್ತೆ ಬಂಗ್ಲೆಗುಡ್ಡಕ್ಕೆ ಭೇಟಿ ನೀಡಿದ್ದು. ಚಿನ್ನಯ್ಯ ತಂದಿದ್ದ ಬುರುಡೆಯ ತನಿಖೆಯ ಭಾಗವಾಗಿ ಬಂಗ್ಲೆಗುಡ್ಡಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.