ಶಿಕ್ಷಣ ವ್ಯವಸ್ಥೆಯ ಸುಧಾರಣೆ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಜವಾಬ್ದಾರಿ ನಿಗದಿಗೆ ಆಗ್ರಹಿಸಿ 26 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್, ಉಪವಾಸ ಅಂತ್ಯಗೊಳಿಸಿದ ಬಳಿಕ ತಮ್ಮ ವಿರುದ್ಧ ಕೇಳಿಬಂದ ಟೀಕೆಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದ್ದ ವಿಪಕ್ಷಗಳ ಆರೋಪಕ್ಕೆ ಸೋನಂ ತಿರುಗೇಟು ನೀಡಿದ್ದಾರೆ.
ಸೋನಂ ವಾಂಗ್ಚಕ್ ಉಪವಾಸ ಮುರಿದ ನಂತರ ಸರ್ಕಾರದೊಂದಿಗೆ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪಗಳನ್ನು ತಳ್ಳಿಹಾಕಿದ್ದು, "26 ದಿನ ಉಪವಾಸ ಮಾಡಿದ ಬಳಿಕವೂ ನನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸಲು ಯಾರಿಂದಾದರೂ 'ಚರಿತ್ರೆ ಪ್ರಮಾಣಪತ್ರ' ಪಡೆಯಬೇಕೇ?" ಎಂದು ಪ್ರಶ್ನಿಸಿದ್ದಾರೆ. ತಮ್ಮ ಹೋರಾಟ ಪವಿತ್ರವಾಗಿದ್ದು, ಅದನ್ನು ಅಪಪ್ರಚಾರದ ಮೂಲಕ ಕಳಂಕಗೊಳಿಸಲು ಪ್ರಯತ್ನಿಸಲಾಗುತ್ತಿದೆ, ಉಪವಾಸ ಅಂತ್ಯಗೊಳಿಸಲು ಯಾವುದೇ ರಾಜಕೀಯ ಒಪ್ಪಂದ ಕಾರಣವಾಗಿಲ್ಲ. ಪ್ರತಿಭಟನೆ ಮುಂದುವರಿದರೆ ಹಿಂಸಾಚಾರ ಸಂಭವಿಸುವ ಸಾಧ್ಯತೆ ಹಾಗೂ ಸರ್ಕಾರದಿಂದ ಲಿಖಿತ ಭರವಸೆ ದೊರೆತ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಉಪವಾಸ ಮುಗಿದರೂ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಪರೀಕ್ಷಾ ಸುಧಾರಣೆ ಹಾಗೂ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸುವ ಹೋರಾಟ ಮುಂದುವರಿಯಲಿದೆ ಎಂದು ಹೇಳಿರುವ ಸೋನಂ ಮುಂದಿನ ದಿನಗಳಲ್ಲೂ ಶಾಂತಿಯುತವಾಗಿ ಹೋರಾಟ ನಡೆಸುವುದಾಗಿ ಘೋಶಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಸೋನಂ ವಾಗಚುಕ್ ಕೇಂದ್ರ ಸರ್ಕಾರ ನೀಡಿದ ಭರವಸೆ ಮೇರೆಗೆ ತಮ್ಮ ಉಪವಾಸ ಸತ್ಯಗ್ರಹವನ್ನ ಅಂತ್ಯಗೊಳಿಸಿದ್ದರು.