ಕೊಲ್ಕತ್ತಾ: ಬಂಗಾಳ ರಾಜಕಾರಣದಲ್ಲಿ ಮತ್ತೊಂದು ಅನಿರೀಕ್ಷಿತ ಬೆಳವಣಿಗೆಯಾಗಿದ್ದು, ಟಿಎಂಸಿ ಪಕ್ಷ ಎರಡು ಭಾಗವಾಗಿ ಹಿಬ್ಭಾಗವಾಗಿದೆ, ಈ ಮೂಲಕ ವಿಧಾನ ಸಭೆಯ ವಿರೋಧ ಪಕ್ಷದ ನಾಯಕಿಯಾಗಬೇಕಿದ್ದ ಮಮತಾ ಬ್ಯಾನರ್ಜಿಗೆ ಭಾರೀ ಆಘಾತ ನೀಡಲಾಗಿದೆ. ಕೆಲ ದಿನಗಳ ಹಿಂದೆ ಟಿಎಂಸಿಯಿಂದ ಉಚ್ಚಾಟನೆಯಾಗಿದ್ದ ರಿತಬ್ರತಾ ಬ್ಯಾನರ್ಜಿ ನೂತನ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ಸ್ವಂತ ಪಕ್ಷದಲ್ಲೇ ಮಮತಾ ಮೂಲೆ ಗುಂಪಾಗಿದ್ದಾರೆ.
ರಿತಬ್ರತ ಬ್ಯಾನರ್ಜಿ ಬರೋಬ್ಬರಿ 58 ಶಾಸಕರ ಬೆಂಬಲದೊಂದಿಗೆ ಅವರು ಈ ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಿದ್ದಾರೆ. ಪಕ್ಷದಿಂದ ಉಚ್ಚಾಟನೆಗೊಂಡ ನಾಯಕರೊಬ್ಬರು ಇಷ್ಟು ದೊಡ್ಡ ಮಟ್ಟದ ಶಾಸಕರ ಬೆಂಬಲದೊಂದಿಗೆ ಪ್ರತಿಪಕ್ಷ ನಾಯಕರಾಗಿ ಹೊರಹೊಮ್ಮಿರುವುದು ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಮಮತಾ ಬ್ಯಾನರ್ಜಿಯೇ ನಮ್ಮ ಸರ್ವೋಚ್ಚ ನಾಯಕಿ..!
ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ರಿತಬ್ರತಾ ಬ್ಯಾನರ್ಜಿ ಅವರು ಅತ್ಯಂತ ಮಹತ್ವದ ಹೇಳಿಕೆ ನೀಡಿದ್ದಾರೆ. “ನಾನು ಪ್ರತಿಪಕ್ಷ ನಾಯಕನಾಗಿ ಆಯ್ಕೆಯಾಗಿರಬಹುದು. ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ನಮ್ಮ ಸರ್ವೋಚ್ಚ ನಾಯಕಿ. ಇದರಲ್ಲಿ ಯಾವುದೇ ಸಂದೇಹವಿಲ್ಲ” ಎಂದು ಹೇಳಿದ್ದಾರೆ. ನಮ್ಮ ಶಾಸಕಾಂಗ ಪಕ್ಷವು ಇಂದಿಗೂ ಟಿಎಂಸಿ ಮುಖ್ಯಸ್ಥೆ ಮತ್ತು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನೇ ತನ್ನ ನಾಯಕಿ ಎಂದು ಪರಿಗಣಿಸುತ್ತದೆ. ಅವರು ನಮ್ಮ ಶಾಸಕಾಂಗ ಪಕ್ಷದ ಮುಖ್ಯ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸಬೇಕು ಎಂದು ನಾವು ವಿನಂತಿಸುತ್ತೇವೆ ಎಂದು ಹೇಳಿದ್ದಾರೆ.
ಮುಂದುವರಿದು ಮಾತನಾಡಿರುವ ರಿತಬ್ರತ ಬ್ಯಾನರ್ಜಿ "ನಮ್ಮ ಬಳಿ ಮೂರನೇ ಎರಡರಷ್ಟು ಶಾಸಕರ ಬೆಂಬಲವಿದೆ. ಹಾಗಾಗಿ ನಾವೇ ನಿಜವಾದ ತೃಣಮೂಲ ಕಾಂಗ್ರೆಸ್. ಸಂಸದೀಯ ನಿಯಮಗಳ ಪ್ರಕಾರ ನಾವೇ ಪಶ್ಚಿಮ ಬಂಗಾಳ ವಿಧಾನಸಭೆಯ ನಿಜವಾದ ಮತ್ತು ಮುಖ್ಯ ವಿರೋಧ ಪಕ್ಷ” ಎನ್ನುವ ಮೂಲಕ ರಿತಬ್ರತಾ ಬ್ಯಾನರ್ಜಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ರಿತಬ್ರತಾ ಬ್ಯಾನರ್ಜಿ ಅವರಿಗೆ 58 ಶಾಸಕರು ಲಿಖಿತ ಬೆಂಬಲ ಸೂಚಿಸಿದ್ದು, ಇದರ ಆಧಾರದ ಮೇಲೆಯೇ ಅವರನ್ನು ಅಧಿಕೃತವಾಗಿ ಪ್ರತಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಟಿಎಂಸಿ ಪಕ್ಷದಿಂದ ಉಚ್ಚಾಟಿತರಾಗಿದ್ದರೂ ಮಮತಾ ಬ್ಯಾನರ್ಜಿ ಅವರನ್ನೇ ತಮ್ಮ ನಾಯಕಿ ಎಂದು ಕರೆಯುವ ಮೂಲಕ ರಿತಬ್ರತಾ ಕುತೂಹಲ ಮೂಡಿಸಿದ್ದಾರೆ.