ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆ ಬಾರದ ಆಟೋ-ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವ್ಯವಹರಿಸುವಷ್ಟು ಮರಾಠಿ ಕಲಿಯಲು ಒಂದು ವರ್ಷದ ಕಾಲಾವಕಾಶ ನೀಡಿದ್ದಾರೆ. ಈ ಅವಧಿಯಲ್ಲಿ ಭಾಷಾ ಜ್ಞಾನ ಇಲ್ಲ ಎಂಬ ಕಾರಣಕ್ಕೆ ಚಾಲಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಸರ್ಕಾರವು ಚಾಲಕರು ಮೂಲಭೂತ ಮರಾಠಿ ಕಲಿಯಬೇಕು ಎಂದು ಸೂಚಿಸಿ, ಆಗಸ್ಟ್ 15ರ ಗಡುವು ನಿಗದಿಪಡಿಸಿತ್ತು. ಬಳಿಕ ಸಾರಿಗೆ ಇಲಾಖೆ ಮರಾಠಿ ಭಾಷಾ ಸಾಮರ್ಥ್ಯ ಪರಿಶೀಲನೆ ನಡೆಸಿ, ಪರೀಕ್ಷೆಯಲ್ಲಿ ವಿಫಲರಾದ ಚಾಲಕರಿಗೆ ನೋಟಿಸ್ ನೀಡಿತ್ತು. ಇದರಿಂದ ಚಾಲಕರಲ್ಲಿ ಅಸಮಾಧಾನ ಹೆಚ್ಚಾಗಿತ್ತು. ಮುಂಬೈನಲ್ಲಿ ಆಟೋ ಚಾಲಕರು ಮೂರು ದಿನಗಳ ಮುಷ್ಕರವನ್ನೂ ನಡೆಸಿದ್ದರು. ಕಡಿಮೆ ಅವಧಿಯಲ್ಲಿ ಭಾಷೆ ಕಲಿಯುವುದು ಕಷ್ಟವಾಗುತ್ತಿದೆ ಎಂದು ಚಾಲಕರ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿದ್ದವು.
ಚಾಲಕರ ಸಂಘಟನೆಗಳ ಪ್ರತಿನಿಧಿಗಳು ಫಡ್ನವೀಸ್ ಅವರನ್ನು ಭೇಟಿಯಾಗಿ ಹೆಚ್ಚುವರಿ ಸಮಯ ಕೋರಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮರಾಠಿಯಲ್ಲಿ ಸಂಪೂರ್ಣ ಪಾಂಡಿತ್ಯವಲ್ಲ, ಪ್ರಯಾಣಿಕರೊಂದಿಗೆ ಸಂವಹನ ನಡೆಸಲು ಅಗತ್ಯವಿರುವಷ್ಟು ಮೂಲಭೂತ ಜ್ಞಾನ ಹೊಂದುವುದು ಉದ್ದೇಶ ಎಂದು ಫಡ್ನವೀಸ್ ಹೇಳಿದ್ದಾರೆ. ಈ ಹಿಂದೆ ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಅವರು ಮರಾಠಿ ಕಲಿಯದ ಚಾಲಕರ ಲೈಸೆನ್ಸ್ ಮತ್ತು ಪರ್ಮಿಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಹೇಳಿದ್ದರು. ಫಡ್ನವೀಸ್ ಅವರ ಹೊಸ ನಿರ್ಧಾರದಿಂದ ಸದ್ಯಕ್ಕೆ ಅಂತಹ ಕಠಿಣ ಕ್ರಮಗಳಿಗೆ ಒಂದು ವರ್ಷದ ವಿರಾಮ ಸಿಕ್ಕಂತಾಗಿದೆ.