Search


ಮಧ್ಯರಾತ್ರಿವರೆಗೆ ಸಂಧಾನ ಸಭೆ ಡಿಕೆ-ರೆಡ್ಡಿ ಮನಸ್ಥಾಪ ಸರಿಹೋಯ್ತಾ..!

ಬೆಂಗಳೂರು: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಕಾಂಗ್ರೆಸ್‌ ನಾಯಕ ರಾಮಲಿಂಗಾ ರೆಡ್ಡಿ (Ramalinga Reddy) ಅವರ ಜೊತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಮಧ್ಯರಾತ್ರಿ ಸುದೀರ್ಘ ಸಭೆ ನಡೆಸಿದ್ದಾರೆ. ಜಯನಗರದ  ಖಾಸಗಿ ಹೋಟಲ್‌ನಲ್ಲಿ ಸುಮಾರು 2.5ಗಂಟೆ ಸಭೆ ನಡೆಸಿದ್ದು, ಈ ವೇಳೆ ಮನವೊಲಿಸಲು ಯತ್ನಿಸಿದ್ದೇನೆ ಎಂದು ಹೇಳಿದ್ದಾರೆ.

ಏನೇ ಸಮಸ್ಯೆ ಇದ್ದರು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೈಕಮಾಂಡ್ ಸೂಚನೆ ನೀಡಿದ ಬೆನ್ನಲ್ಲೇ, ಶುಕ್ರವಾರ ತಡರಾತ್ರಿ ಬೆಂಗಳೂರಿನ ಜಯನಗರದ ಖಾಸಗಿ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹಾಗೂ ರಾಮಲಿಂಗಾ ರೆಡ್ಡಿ ಸತತ ಎರಡೂವರೆ ಗಂಟೆಗಳ ಕಾಲ ಸುದೀರ್ಘ ಸಂಧಾನ ಮಾತುಕತೆ ನಡೆಸಿದ್ದಾರೆ.

ಎಲ್ಲವೂ ನಿವಾರಣೆಯಾಗಿದೆ ಎಂದ ಡಿಕೆ ಶಿವಕುಮಾರ್‌...!

ಮಧ್ಯರಾತ್ರಿ 1:30ರ ಸುಮಾರಿಗೆ ಮಾತುಕತೆ ಮುಗಿಸಿ ಹೊರಬಂದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಯಾವುದೇ ಆತಂಕ ಬೇಡ, ನಾವೆಲ್ಲಾ ಹಳೆಯ ಸ್ನೇಹಿತರು. ಕೂತು ಮಾತನಾಡಿ ಎಲ್ಲವನ್ನೂ ಬಗೆಹರಿಸಿಕೊಂಡಿದ್ದೇವೆ ಎಂದರು. ರಾಜೀನಾಮೆ ವಾಪಸ್ ಪಡೆದಿದ್ದಾರೆಯೇ ಎಂಬ ಪ್ರಶ್ನೆಗೆ, ‘ನಿಮಗೆ ಎಲ್ಲವನ್ನೂ ಹೇಳಬೇಕಾಗಿಲ್ಲ’ ಎಂದರು. ಇತ್ತ ಸಚಿವ ರಾಮಲಿಂಗಾ ರೆಡ್ಡಿ ಕೂಡ ಸಿಎಂ ಧಾಟಿಯಲ್ಲೇ ಉತ್ತರಿಸಿ, ‘ಮುಖ್ಯಮಂತ್ರಿಗಳು ಏನು ಹೇಳಿದ್ದಾರೋ ಅದನ್ನೇ ನಾನು ಹೇಳುವುದು. ಎಲ್ಲ ಗೊಂದಲಗಳು ನಿವಾರಣೆಯಾಗಿವೆ’ ಎಂದು ಹೇಳಿ ಕಾರು ಹತ್ತಿ ನಿರ್ಗಮಿಸಿದರು.

By Ravikumar - 07-06-2026


Ads in Post